ಚಕ್ರವರ್ತಿಯಾಗಬಹುದಾಗಿದ್ದ ಭೀಷ್ಮರ ಇಡೀ ಜೀವನದ ನೋವು ಅವಮಾನಕ್ಕೆ ಆ ಮಹಾಮುನಿಯ ಶಾಪ ಕಾರಣವಾಯ್ತಾ ?

Adhyatma

ಪ್ರಿಯ ಸ್ನೇಹಿತರೇ, ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಮಹಾಮಹಿಮ ಭೀಷ್ಮಾಚಾರ್ಯ ಒಬ್ಬರು. ಬಹುಷಃ ಆಗಿನ ಕಾಲಕ್ಕೆ ಭಗವಾನ್ ಶ್ರೀ ಕೃಷ್ಣನನ್ನೇ ಬಿಟ್ಟರೆ ಅತೀ ಹೆಚ್ಚು ಗೌರವಕ್ಕೆ ಪಾತ್ರನಾದ ವ್ಯಕ್ತಿ ಎಂದರೆ ಅದು ಭೀಷ್ಮ ಎಂದರೆ ತಪ್ಪಾಗೊದಿಲ್ಲ. ಚಕ್ರವರ್ತಿ ಶಂತನು ಮಾತೆ ಗಂಗಾದೇವಿಗೆ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವರು. ಗಂಗಾದೇವಿಯ ಪುತ್ರನಾಗಿರುವ ಕಾರಣ ಇವರನ್ನ ಗಾಂಗೇಯ, ದೇವವ್ರತ ಹೆಸರುಗಳಿಂದಲೂ ಕರೆಯುತ್ತಾರೆ. ತನ್ನ ತಂದೆಯ ಸುಖಕೊಸ್ಕರ ಇಡೀ ಜೀವನ ಪರ್ಯಂತ ಬ್ರಹ್ಮಚರ್ಯ ಪಾಲಿಸುವುದಾಗಿ ಭೀಷ್ಮ ಪ್ರತಿಜ್ಞೆಯನ್ನ ಮಾಡಿದ್ದಲ್ಲದೇ ಹಸ್ತಿನಾವತಿ ರಾಜ್ಯದ ಸಿಹಾಸನವನ್ನೇ ಬಿಟ್ಟುಕೊಟ್ಟು ಅದರ ರಕ್ಷಣೆಗೆ ನಿಂತ ಮಹಾಮಹಿಮರು. ಇದೇ ಕಾರಣದಿಂದಾಗಿ ತನ್ನ ತಂದೆಯಿಂದ ಇಚ್ಛಾ ಮರಣದ ವರವನ್ನ ಪಡೆದವರು. ಭಗವಾನ್ ಪರುಶುರಾಮರ ಶಿಷ್ಯರು. ಮಹಾ ಧರ್ಮಜ್ಞನಾಗಿದ್ದರೂ ತನ್ನ ಪ್ರತಿಜ್ಞೆಯಿಂದಾಗಿ ಅಧರ್ಮಿಗಳ ಪರ ನಿಲ್ಲುವಂತಾಯಿತು.

ಸೋಲಿಲ್ಲದ ಸರದಾರ ಮಹಾಯೋಧನಾಗಿದ್ದ ಭೀಷ್ಮರು ಮನಸ್ಸು ಮಾಡಿದ್ದರೆ ಚಕ್ರವರ್ತಿಯಾಗುವುದಕ್ಕೆ ಅಂತಹ ಕಷ್ಟವೇನೂ ಆಗುತ್ತಿರಲಿಲ್ಲ. ಸಾಕ್ಷಾತ್ ಗಂಗಾ ದೇವಿಯ ಪುತ್ರನಾಗಿದ್ದರೂ ಪಿತಾಮಹರು ತನ್ನ ಜೀವವವಿಡಿ ನೋವು ಅವಮಾನವನ್ನೇ ಉಂಡವರು. ಆದರೆ ಇದೆಲ್ಲದಕ್ಕೂ ಕಾರಣವೊಂದಿದೆ. ಅದೇ ಋಷಿಯೊಬ್ಬರ ಶಾಪ. ಹೌದು ಸ್ನೇಹಿತರೆ, ಒಮ್ಮೆ ಅಷ್ಟ ವಸುಗಳು (ಎಂಟು ಜನ ವಸುಗಳು) ತಮ್ಮ ತಮ್ಮ ಪತ್ನಿಯರೊಡನೆ ಮಹಾ ಮುನಿ ವಶಿಷ್ಠರ ಆಶ್ರಮಕ್ಕೆ ಬರುತ್ತಾರೆ. ಅಷ್ಟವಸುಗಳಲ್ಲಿ ಒಬ್ಬನ ಹೆಸರು ಪ್ರಭಾಸ ಎಂದು. ಈತನ ಪತ್ನಿಗೆ ವಶಿಷ್ಠರ ಆಶ್ರಮದಲ್ಲಿದ್ದ ಬೇಡಿದ್ದನ್ನೆಲ್ಲ ಕೊಡುವ ಕಾಮಧೇನು ತನಗೆ ಬೇಕೆಂಬ ದುರಾಸೆ ಮೂಡುತ್ತದೆ.

ತನ್ನ ಮನದಾಸೆಯನ್ನ ಪತಿ ಪ್ರಭಾಸನ ಬಳಿ ಹೇಳಿಕೊಳ್ಳುತ್ತಾಳೆ. ಇನ್ನು ಪತ್ನಿಯ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ಪ್ರಭಾಸನು ಮುನಿಗಳ ಆಶ್ರಮದಿಂದ ಕಾಮದೇನುವನ್ನ ಕದ್ದೊಯ್ಯಲು ನಿರ್ಧಾರ ಮಾಡಿದ್ದು ಈತನ ನಿರ್ಧಾರಕ್ಕೆ ಉಳಿದವರು ಕೂಡ ಸಹಾಯ ಮಾಡಲು ನಿಲ್ಲುತ್ತಾರೆ. ಬ್ರಹ್ಮರ್ಷಿಗಳಾಗಿದ್ದ ವಶಿಷ್ಟರಿಗೆ ಇದರ ಬಗ್ಗೆ ಗೊತ್ತಾಗಿ ಕೋಪಗೊಂಡು ನೀವೆಲ್ಲಾ (ಅಷ್ಟ ವಸುಗಳು) ಮನುಷ್ಯರಾಗಿ ಭೂಲೋಕದಲ್ಲಿ ಹುಟ್ಟಿ ಎಂಬ ಶಾಪವನ್ನ ಕೊಟ್ಟು ಬಿಡುತ್ತಾರೆ. ಇದರಿಂದ ಭಯಗೊಂಡ ಅಷ್ಟವಸುಗಳು ಕೂಡಲೇ ವಶಿಷ್ಠ ಮಹರ್ಷಿಗಳ ಪಾದಕ್ಕೆ ಎರಗಿ ತಮ್ಮಿಂದ ಅಪರಾಧವಾಯಿತು ಎಂದು ಕ್ಷಮೆಯಾಚಿಸುತ್ತಾರೆ. ತಮ್ಮ ಶಾಪವನ್ನ ಹಿಂದಕ್ಕೆ ತೆಗೆದುಕೊಳ್ಳುವಂತೆ ಕಣ್ಣೀರು ಹಾಕುತ್ತಾ ಬೇಡಿಕೊಳ್ಳುತ್ತಾರೆ. ಇನ್ನು ಅವರ ಧೈನ್ಯತೆಗೆ ಕರಗಿದ ವಶಿಷ್ಠರು ಒಮ್ಮೆ ಕೊಟ್ಟ ಶಾಪವನ್ನ ಹಿಂಪಡೆಯಲು ಸಾಧ್ಯವಿಲ್ಲ ಎಂದು ವಸು ಪ್ರಭಾಸನನ್ನ ಬಿಟ್ಟು ಉಳಿದ ಏಳು ವಸುಗಳಿಗೆ ಕ್ಷಮಾಧಾನ ನೀಡಿ ಶಾಪದ ವಿನಾಯತಿ ನೀಡುತ್ತಾರೆ.

ಹಾಗಾಗಿ ಈ ಏಳು ವಸುಗಳು ಮನುಷ್ಯ ಜನ್ಮದಲ್ಲಿ ಹುಟ್ಟಿದ ಕೂಡಲೇ ಮರಣವನ್ನೊಪ್ಪಿ ಮುಕ್ತಿ ಪಡೆಯುತ್ತಾರೆ. ಅವರೇ ಚಕ್ರವರ್ತಿ ಶಂತನು ಮತ್ತು ಗಂಗಾ ದೇವಿಯ ಮೊದಲ ಏಳು ಮಕ್ಕಳು. ಆದರೆ ಈ ಮಹಾಪರಾಧದ ಮೂಲ ಕಾರಣಕರ್ತನಾದ ವಸು ಪ್ರಭಾಸನ ಶಾಪ ಹಿಂಪಡೆಯುವುದಕ್ಕೆ ನಿರಾಕರಿಸುತ್ತಾರೆ. ಆದರೆ ಪ್ರಭಾಸನು ದಯನೀಯವಾಗಿ ಹಲವಾರು ಕೋರಿಕೆಗಳನ್ನಿಟ್ಟು ವಶಿಷ್ಠ ಮುನಿಗಳಲ್ಲಿ ಕೇಳಿಕೊಂಡಾಗ ಮನಸ್ಸು ಕರಗಿದ ಮಹರ್ಷಿಗಳು ನೀನು ಸುದೀರ್ಘವಾದ ಜೀವನವನ್ನ ನಡೆಸಬೇಕು. ನಿನ್ನ ಸಮಕಾಲೀನ ಘಟ್ಟದಲ್ಲಿ ನಿನ್ನನ್ನ ಸರಿಗಟ್ಟುವ ಮಾನವರೇ ಇಲ್ಲದಂತಾಗಿ ಪ್ರಖ್ಯಾತ ವ್ಯಕ್ತಿಯಾಗಿ ಬದುಕುವಂತೆ ಅನುಗ್ರಹ ನೀಡುತ್ತಾರೆ.

ಇದೆ ಶಾಪದಿಂದಾಗಿ ವಾಸು ಪ್ರಭಾಸನು ಶಂತನು ಹಾಗೂ ಗಂಗಾ ದೇವಿಯ ಎಂಟನೇ ಪುತ್ರನಾಗಿ ದೇವವ್ರತನಾಗಿ ಹುಟ್ಟುತ್ತಾನೆ. ಮುಂದೆ ಭೀಷ್ಮ ಎಂಬ ಹೆಸರಿನಿಂದಲೇ ಇಡೀ ಆರ್ಯಾವರ್ತದಲ್ಲೇ ಪ್ರಖ್ಯಾತನಾಗುತ್ತಾನೆ. ಸ್ನೇಹಿತರೆ, ಮಹಾಭಾರತ ಗ್ರಂಥ ದೊಡ್ಡ ಸಾಗರವಿದ್ದಂತೆ..ಮಂಥನ ಮಾಡಿದಷ್ಟೂ ಹೊಸ ಹೊಸ ವಿಷಯಗಳು ಹೊರಗಡೆ ಬರುತ್ತವೆ. ಇಲ್ಲಿ ಯಾರದೇ ಮನಸ್ಸಿನ ಭಾವನೆಗಳಿಗೆ ನೋವುಂಟು ಮಾಡುವುದಲ್ಲ. ನಿಮ್ಮ ಅಭಿಪ್ರಾಯಗಳನ್ನ ನಮಗೆ ತಿಳಿಸಿ..