ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಬಿರುಗಾಳಿ ಎಬ್ಬಿಸಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ವುಡ್ ನ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ವಿಚಾರಣೆ ನಡೆದಿದ್ದು, ಇದರ ವಿಚಾರವಾಗಿ ವಿಡಿಯೋವೊಂದನ್ನ ಮಾಡಿರುವ ಅನುಶ್ರೀ ತನಗಾಗಿರುವ ನೋವಿನ ಕುರಿತಂತೆ ಮಾತನಾಡಿದ್ದು ಕಣ್ಣೀರು ಹಾಕಿದ್ದಾರೆ. ನಾನು ಯಾರದ್ದೋ ಕರುಣೆಯನ್ನ ಗಳಿಸುವುದೊಸ್ಕರವೋ ಅಥ್ವಾ ನನ್ನನ್ನ ನಾನು ಸಮರ್ಥನೆ ಮಾಡಿಕೊಳ್ಳಲೋ ಈ ವಿಡಿಯೋ ಮಾಡಿಲ್ಲ. ಆದರೆ ನನ್ನ ಸುತ್ತಮುತ್ತಿನವರು ಬೇರೆ ಬೇರೆ ರೀತಿ ನನ್ನ ಬಗ್ಗೆಯೇ ಮಾತನಾಡುತ್ತಿರುವುದರಿಂದ ನಾನು ಈ ವಿಡಿಯೋ ಮಾಡಿದ್ದೇನೆ ಎಂದು ಗಳಗಳನೆ ಅತ್ತಿದ್ದಾರೆ.
ಅನುಶ್ರೀ ವಿಡಿಯೋದಲ್ಲಿ ಹೇಳಿರುವ ಹಾಗೆ ನನ್ನ ಇಡೀ ಜೀವನದಲ್ಲಿ ಸೆಪ್ಟೆಂಬರ್ ೨೪ ಮತ್ತೆಂದೂ ನೆನಪಿಸ್ಕೊಳ್ಳೋಕೆ ಇಷ್ಟವಾಗದ ದಿನವಾಗಿದೆ. ಹನ್ನೆರಡು ವರ್ಷಗಳ ಹಿಂದೆ ನಾನು ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದು ವಿನ್ನರ್ ಆಗಿದ್ದೆ. ಆದರೆ ಅದು ಮುಂದೊಮ್ಮೆ ನನಗೆ ಮುಳ್ಳಾಗುತ್ತೆ ಎಂದು ನಾನು ಯೋಚನೆ ಕೂಡ ಮಾಡಿರಲಿಲ್ಲ ಎಂದು ತಮ್ಮ ಬೇಸರವನ್ನ ಹೊರಹಾಕಿದ್ದಾರೆ.
ನಾನು ವಿಚಾರಣೆಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಎಂತಾಗುವುದಿಲ್ಲ. ಆದರೆ ಇದೆ ವಿಚಾರವಾಗಿ ನನ್ನನ್ನ ಬಿಂಬಿಸಿದ ರೀತಿ ಮಾತ್ರ ನನಗೆ ತುಂಬಾ ನೋವು ಭರಿಸುವಂತಾಗಿದೆ. ಒಂದು ವಾರದಿಂದ ನನ್ನ ಹಾಗೂ ನನ್ನ ಕುಟುಂಬದವರ ನೆಮ್ಮದಿಯನ್ನ ಈ ವಿಚಾರಗಳು ಹಾಳು ಮಾಡಿದೆ. ಆದರೆ ಇಂತಹ ಕಷ್ಟದ ಸಮಯದಲ್ಲೂ ನನ್ನ ಬಗ್ಗೆ ನಂಬಿಕೆ ಇಟ್ಟು ನನ್ನ ಜೊತೆ ನಿಂತಿರುವ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ಜೀವನದಲ್ಲಿ ಇದನ್ನ ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ.

ಆದರೆ ಇದರೆಲ್ಲದರ ನಡುವೆ ಸುತ್ತ ಮುತ್ತಲಿನ ಕೆಲವೊಂದು ವಿಚಾರಗಳು ನಮ್ಮ ಮನೆಯ ನೆಮ್ಮದಿಯನ್ನೇ ಹಾಳು ಮಾಡುತ್ತಿವೆ. ಇಂತಹ ಅಂತೆಕಂತೆಯ ವಿಚಾರದ ಸುದ್ದಿಗಳನ್ನ ಹಂಚಿಕೊಳ್ಳುವ ಮುನ್ನ ಒಂದು ಬಾರಿ ನಮ್ಮ ನೋವು, ನಮ್ಮ ಸ್ಥಿತಿಯ ಬಗ್ಗೆ ಯೋಚನೆ ಮಾಡಿ. ಇದಷ್ಟನ್ನೇ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ನೀವು ನನಗೆ ಕೊಟ್ಟಿರುವ ಹೆಸರಿಗೆ ಧಕ್ಕೆ ಬರುವಂತಹ ಯಾವುದೇ ಕೆಲಸವನ್ನ ನಾನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಅನುಶ್ರೀ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.