ಶಾಲೆಗಳು ಮತ್ತೆ ಶುರುವಾಗುವವರೆಗೆ ನಿಮ್ಮ ಮಕ್ಕಳನ್ನ ನಿಯಂತ್ರಿಸಲು ಹೀಗೆ ಮಾಡಿ..

Kannada News

ಮಕ್ಕಳು ಇರುವ ಮನೆಯಲ್ಲಿ ಸದ್ಯದ ಸಮಸ್ಯೆ ಎಂದರೆ ಅವರನ್ನು ನಿಭಾಯಿಸುವುದು. ಶಾಲೆ ನಡೆಯುತಿದ್ದ ಸಮಯದಲ್ಲೇ ಮಕ್ಕಳನ್ನು ಓದಿಸುವುದು ಕಷ್ಠವಾಗಿತ್ತು. ಇನ್ನೂ ಈಗ ಕೇವಲ ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಕಲಿಸುವುದು ಸರಳವಲ್ಲ, ಸುಲಭವೂ ಅಲ್ಲ. ಅಲ್ಲದೆ ತುಂಟ ಮಕ್ಕಳನ್ನು ನಿಯಂತ್ರಿಸುವುದು ಪೋಷಕರಿಗೆ ಈಗ ತಲೆನೋವಾಗಿದೆ. ಶಾಲೆ ಆರಂಭ ಆಗುವವರೆಗೂ ಮಕ್ಕಳ ಮೇಲೆ ವಿಶೇಷ ಕಾಳಜಿ ಇಡುವುದು ಪೋಷಕರ ಅತಿ ಮುಖ್ಯ ಕೆಲಸವಾಗಿದೆ. ಓದು ಬರಹ ಮಾತ್ರವಲ್ಲ ಇತರೆ ವಿಷಗಳ ಮೇಲೂ ಮಕ್ಕಳ ಮೇಲೆ ನಿಗಾ ಇಡುವುದು ಅತ್ಯಗತ್ಯ.

ಲಾಕ್ ಡೌನ್ ತೆರವುಗೊಂಡಿದ್ದರೂ ಕೋರೋನ ರೋಗಕ್ಕೆ ಲಸಿಕೆ ಬರುವವರೆಗೆ ಆದಷ್ಟು ಮಕ್ಕಳನ್ನು ಹೊರಗೆ ಕೊಂಡೊಯ್ಯುವುದು ಸೂಕ್ತವಲ್ಲ. ಹೊರಗೆ ಓಡಾಡುವುದು, ಪ್ರವಾಸ ಹೋಗುವುದು, ಸದ್ಯಕ್ಕೆ ಕೈಬಿಡಿ. ಮನೆಯಲ್ಲೇ ಕಾಲ ಕಳೆಯುವ ಮಕ್ಕಳಿಗೆ ಅದು ಇದು ತಿನ್ನಬೇಕು ಅನಿಸುತ್ತದೆ. ಆಗ ಹೊರಗಿನಿಂದ ತಿಂಡಿ ತಿನಿಸು ತರಿಸಿ ಕೊಡುವ ಬದಲು ನೀವೇ ಏನಾದರೂ ಮಾಡಿ ಕೊಡಿ, ಜೊತೆ ಅವರನ್ನು ಸಹಾಯ ಮಾಡುವಂತೆ ಹೇಳಿ. ಇಲ್ಲವೇ ಅವರ ಕೈಯಲ್ಲೇ ಸರಳವಾದ ತಿಂಡಿಗಳನ್ನು ಮುಂದೆ ನಿಂತು ಮಾಡಿಸಿ. ಅಥವಾ ಅವರಿಗೆ ಏನಾದರೂ ಟಾಸ್ಕ್ ಕೊಟ್ಟು ಅದನ್ನು ಪೂರ್ಣ ಗೊಳಿಸಿದಾಗ ಮಾತ್ರವೇ ಅವರು ಇಷ್ಟ ಪಡುವ ತಿಂಡಿಯನ್ನು ಅಥವಾ ಉಡುಗೊರೆಗಳನ್ನು ಕೊಡುವುದಾಗಿ ತಿಳಿಸಿ.

ಆಗ ಅವರು ಉತ್ಸುಕತೆಯಿಂದ ನೀವು ಹೇಳುವ ಕೆಲಸವನ್ನು ಮಾಡುತ್ತಾರೆ ಮತ್ತು ಆರೋಗ್ಯಕರ ಆಹಾರ ಸೇವಿಸುತ್ತಾರೆ. ಹಸಿ ತರಕಾರಿ, ಹಣ್ಣುಗಳಿಂದ ಮಾಡುವ ಸರಳ ತಿಂಡಿಗಳನ್ನು ಮಾಡುವುದನ್ನು ಅವರಿಗೆ ಕಲಿಸಿಕೊಡಿ. ಪೋಷಕರು ಈ ಸಮಯದಲ್ಲಿ ತಾಳ್ಮೆಯಿಂದ ಇರುವುದು ಅತ್ಯಗತ್ಯ. ಮಕ್ಕಳ ತುಂಟಾಟ, ರಂಪಾಟಗಳಿಂದ ಕೋಪ ಬರುವುದು ಸಹಜ. ಆದರೆ ಮಕ್ಕಳೇ ಮೇಲೆ ಕೂಗಾಡುವುದು ಕಿರುಚಾಡುವುದು ಮಾಡುವುದರಿಂದ ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಂದು ವೇಳೆ ಮಕ್ಕಳಿಗೆ ಬೈದರೂ ನಂತರ ಅಷ್ಟೇ ಪ್ರೀತಿಯನ್ನು ಆ ಕೂಡಲೇ ತೋರಿಸಬೇಕು. ಮಕ್ಕಳ ಜೊತೆ ಸ್ನೇಹದಿಂದ ವರ್ತಿಸಬೇಕು.

ಶಾಲೆಯಲ್ಲಿ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದ ಮಕ್ಕಳು ಈಗ ಗೆಳೆಯರಿಂದ ದೂರಾಗಿದ್ದಾರೆ. ಇದು ಅವರ ಮನಸಿನಲ್ಲಿ ಬೇಸರ, ಖಿನ್ನತೆಗೆ ಕಾರಣವಾಗಬಹುದು. ಆದ್ದರಿಂದ ದೂರವಾಣಿಯ ಮುಖಾಂತರ ಅವರ ಸ್ನೇಹಿತರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಿ. ನಿಮ್ಮ ಕುಟುಂಬದಲ್ಲಿ ಬೇರೆಯ ಮಕ್ಕಳೊಂದಿಗೆ ಆಟವಾಡಲು, ಸಮಯ ಕಳೆಯಲು ಅನುವು ಮಾಡಿ ಕೊಡಿ. ಪಾಠದ ಜೊತೆ ನೃತ್ಯ, ಚಿತ್ರಕಲೆ, ಸಂಗೀತ ಮುಂತಾದವುಗಳನ್ನು ಕಲಿಸಲು ಇದು ಒಳ್ಳೆಯ ಸಮಯ. ಜೊತೆ ನಮ್ಮ ದೇ ಆಟಗಳಾದ ಚೌಕಾಬಾರ ಮುಂತಾದವುಗಳನ್ನು ಕಲಿಸಿ.

ಓದುವ ವಿಷಯಕ್ಕೆ ಹೊರತುಪಡಿಸಿ ಬೇರೆ ಯಾವುದಕ್ಕೂ ಮೊಬೈಲ್ ಫೋನ್ ಅನ್ನು ಕೊಡಬೇಡಿ. ವಾಟ್ಸ್ ಆ್ಯಪ್ ಮುಂತಾದ ಸೋಷಿಯಲ್ ಮೀಡಿಯಾಗಳ ಬಳಕೆಯನ್ನು ಕಲಿಕೆಯ ಹೊರತು ಅನಾವಶ್ಯಕವಾಗಿ ಮಾಡದಂತೆ ನೋಡಿಕೊಳ್ಳಿ. ಹೆಚ್ಚಿನ ಸಮಯವನ್ನು ನಿಮ್ಮ ಮಕ್ಕಳಿಗೆ ನೀಡಿ. ನೀವು ಅವರನ್ನು ನಿರ್ಲಕ್ಷಿಸುತ್ತೀರಿ ಎಂದು ಅವರಿಗೆ ಅನಿಸಬಾರದು. ಓದುವ ವಿಷಯಕ್ಕೆ ಬಂದರೆ ನಿಮಗೆ ಕೈಲಿ ಆದಷ್ಟನ್ನು ಹೇಳಿಕೊಡಿ. ಇಲ್ಲವೇ ನಿಮ್ಮ ಪರಿವಾರ ಅಥವಾ ಅಕ್ಕ ಪಕ್ಕ ದಲ್ಲಿ ಚೆನ್ನಾಗಿ ಓದಿ ಕೊಂಡವರು ಇದ್ದರೆ ಅವರ ಸಹಾಯ ಪಡೆಯಿರಿ.